ಮಾನವ ಭಾಷಾವಿಜ್ಞಾನ	-	
ಮಾನವನಿಗೂ ಭಾಷೆಗೂ ಇರುವ ನಿಕಟ ಸಂಬಂಧವನ್ನು ಕುರಿತ ವೈಜ್ಞಾನಿಕ ಅಧ್ಯಯನ (ಆಂತ್ರೊಪಾಲೋಜಿಕಲ್ ಲಿಂಗ್ವಿಸ್ಟಿಕ್ಸ್). ಇಪ್ಪತ್ತನೆಯ ಶತಮಾನದ ಉತ್ತರಾರ್ಧದಲ್ಲಿ ಭಾಷಾವಿಜ್ಞಾನದ ಉಪಯೋಗವನ್ನು ಮನಗಂಡು ಅದನ್ನು ಅಧ್ಯಯನ ಮಾಡಲು ತೊಡಗಿದರು. ಯಾವುದೇ ಒಂದು ನಿರ್ದಿಷ್ಟ ಸಮಾಜದ ಸಂಸ್ಕøತಿಯನ್ನು ಕುರಿತು ಅಧ್ಯಯನ ಮಾಡಬೇಕಾದರೆ ಆ ಸಮಾಜದ ಜನರ ಭಾಷೆಯನ್ನು ಕಲಿಯಬೇಕಾಗುತ್ತದೆ. ಏಕೆಂದರೆ ಆ ಸಮಾಜದ ಕಟ್ಟು ಕಟ್ಟಳೆಗಳು, ಪರಂಪರಾಗತ ಮೌಲ್ಯಗಳು ಅವರ ಭಾಷೆಯ ಮುಖಾಂತರವೇ ಪ್ರಕಟವಾಗುತ್ತವೆ. ಭಾಷೆ ಸಂಸ್ಕøತಿಯನ್ನು ಒಳಗೊಂಡಿರುತ್ತದೆ. ಸಂಸ್ಕøತಿಯಲ್ಲಿ ಉಂಟಾದ ವ್ಯತ್ಯಾಸಗಳು ಭಾಷೆಯಲ್ಲೂ ವ್ಯತ್ಯಾಸ ತರುತ್ತವೆ. ಆದ್ದರಿಂದ ಭಾಷೆ ಕಲಿಯದಿದ್ದರೆ ಸಂಸ್ಕøತಿಗೆ ಸಂಬಂಧಿಸಿದ ಅನೇಕ ವಿಚಾರಗಳನ್ನು ತಿಳಿಯಲು ಸಾಧ್ಯವಾಗುವುದಿಲ್ಲ. ಭಾಷೆ ಮತ್ತು ಸಂಸ್ಕøತಿಗಳ ಪರಸ್ಪರ ಸಂಬಂಧ ತಿಳಿಯಲು ಸಾಧ್ಯವಾಗುವುದಿಲ್ಲ. ಭಾಷೆ ಮತ್ತು ಸಂಸ್ಕøತಿಗಳ ಪರಸ್ಪರ ಸಂಬಂಧ ಕುರಿತು ಮ್ಯಾಲಿನೋವ್‍ಸ್ಕಿ, ರೂತ್ ಬೆನೆಡಿಕ್ಟ್. ಮಾರ್ಗರೆಟ್ ಮೀಡ್ ಮುಂತಾದವರು ತಮ್ಮ ಸಂಶೋಧನಾ ಬರೆಹಗಳಲ್ಲಿ ಸ್ಪಷ್ಟಪಡಿಸಿದ್ದಾರೆ.

ವ್ಯಕ್ತಿ, ಸಮಾಜ ಮತ್ತು ಸಂಸ್ಕøತಿಗಳನ್ನು ಒಟ್ಟುಗೂಡಿಸುವ ಮುಖ್ಯಸಾಧನ ಭಾಷೆ. ಮಾನವರ ನಡುವೆ ಪರಸ್ಪರ ಭಾವವಿನಿಮಯಕ್ಕೆ ಭಾಷೆ ಸಹಾಯಕವಾಗಿದೆ. ಮಾನವಶಾಸ್ತ್ರಜ್ಞರು ತಮ್ಮ ಕ್ಷೇತ್ರಕಾರ್ಯಕ್ಕನುಗುಣವಾಗಿ ವಿಜ್ಞಾನದ ಉಪಯೋಗ ಪಡೆದುಕೊಳ್ಳಲು ತೊಡಗಿದುದರ ಫಲವಾಗಿ ಮಾನವ ಭಾಷಾವಿಜ್ಞಾನವೆಂಬ ಪ್ರತ್ಯೇಕ ಶಾಖೆ ಬೆಳೆದು ಬರಲು ಸಾಧ್ಯವಾಯಿತು. ಮಾನವನಿಗೂ ಭಾಷೆಗೂ ಇರುವ ಸಂಬಂಧವನ್ನು ವೈಜ್ಞಾನಿಕವಾಗಿ ಪರಿಶೀಲಿಸುವುದು ಮಾನವಾ ಭಾಷಾ ವಿಜ್ಞಾನಿಯ ಕೆಲಸ. ಸಮಾಜದಲ್ಲಿ ಭಾಷೆಯ ಮುಖ್ಯ ಪಾತ್ರ ಮತ್ತು ಮಾನವ ನಾಗರಿಕತೆಯ ಬೆಳೆವಣಿಗೆಯಲ್ಲಿ ಭಾಷೆ ನಿರ್ವಹಿಸಿದ ಪಾತ್ರವೇನೆಂಬುದನ್ನು ತಿಳಿಯಲು ಮಾನವ-ಭಾಷಾವಿಜ್ಞಾನಿ ಪ್ರಯತ್ನಿಸುತ್ತಾನೆ.

ಮಾನವ ಭಾಷಾವಿಜ್ಞಾನದಲ್ಲಿ ಮೂರು ಪ್ರಮುಖ ವರ್ಗಗಳುಂಟು: 1 ಮಾನವಕುಲಭಾಷಾವಿಜ್ಞಾನ: ಭಾಷೆ, ಭಾಷೆಯ ಉಗಮ, ಪ್ರಾಚೀನಭಾಷೆಗಳು, ಭಾಷೆ ಮತ್ತು ಸಮಾಜ, ಭಾಷೆ ಮತ್ತು ಸಂಸ್ಕøತಿ, ಭಾಷೆಯ ಮೇಲೆ ಸಂಸ್ಕøತಿಯ ಪ್ರಭಾವ, ಸಂಸ್ಕøತಿಯ ಮೇಲೆ ಭಾಷಿಕಪ್ರಭಾವ ಮುಂತಾದ ವಿಷಯಗಳನ್ನು ಈ ವರ್ಗ ಒಳಗೊಂಡಿದೆ. ಭಾಷಿಕ ಮತ್ತು ಸಾಂಸ್ಕøತಿಕ ಅಂಶಗಳ ಪರಸ್ಪರ ಸಂಬಂಧ ಕುರಿತಾದ ಅಧ್ಯಯನವೇ ಆದರೂ ಮುಖ್ಯವಾಗಿ ವಾಸ್ತವಿಕ ಗ್ರಹಿಕೆಯನ್ನು ಭಾಷೆ ನಿಯಂತ್ರಿಸುವ ರೀತಿ ಮತ್ತು ಭಾಷೆ ಸಂಸ್ಕøತಿಯನ್ನು ಪ್ರತಿಬಿಂಬಿಸುವ ಅನೇಕ ಬಗೆಗಳನ್ನು ಕುರಿತು ಮಾನವ ಭಾಷಾವಿಜ್ಞಾನಿ ಅಧ್ಯಯನ ಕೈಗೊಳ್ಳುತ್ತಾನೆ. 2 ಮಾನವಕುಲಭಾಷಿಕ ಅರ್ಥವಿಜ್ಞಾನ: ಈ ಕ್ಷೇತ್ರದ ಬಲುಮುಖ್ಯ ಪ್ರಶ್ನೆಗಳಿವು: ವ್ಯಕ್ತಿಯ ಮಾತು ಸಾಮಾಜಿಕ ಸಂದರ್ಭಗಳಿಗೆ ತಕ್ಕಂತೆ ಬೇರೆ ಬೇರೆ ಅರ್ಥಗಳನ್ನು ಏಕೆ ಪಡೆಯುತ್ತದೆ? ವ್ಯಕ್ತಿಯ ಪ್ರಾಪಂಚಿಕ ಜ್ಞಾನವನ್ನು ಬಿಂಬಿಸುವುದರಲ್ಲಿ ಭಾಷಿಕ ಅಂಶಗಳು ಎಷ್ಟರಮಟ್ಟಿಗೆ ಸಹಾಯಕವಾಗಿವೆ? ಇವುಗಳಿಗೆ ಮಾನವ-ಭಾಷಾವಿಜ್ಞಾನಿ ಉತ್ತರ ಕಂಡುಕೊಳ್ಳಬೇಕು. 3 ಆಡುನುಡಿಯ ಮಾನವಕುಲ ವೃತ್ತಾಂತ: ವಿವಿಧ ಸಾಮಾಜಿಕ ಸನ್ನಿವೇಶಗಳಲ್ಲಿ ವ್ಯಕ್ತಿಯ ಆಡುನುಡಿಯ ಸಾಂಸ್ಕøತಿಕ ಬಗೆಗಳನ್ನು ಕುರಿತ ಅಧ್ಯಯನ ವಿಷಯ. ಒಬ್ಬ ವ್ಯಕ್ತಿ ಅಪರಿಚಿತನೊಬ್ಬನನ್ನು ಸಂಧಿಸಿದಾಗ ಅವನು ಯಾವ ಯಾವ ವಸ್ತು ವಿಷಯಗಳನ್ನು ಕುರಿತು ಸಂಭಾಷಣೆ ನಡೆಸುತ್ತಾನೆ? ಪರಸ್ಪರ ಭೇಟಿಯಾದಾಗ, ಒಬ್ಬರನ್ನು ಪರಿಚಯಿಸುವಾಗ ಅಥವಾ ಸ್ವಾಗತಿಸುವಾಗ ವ್ಯಕ್ತಿ ಯಾವ ಬಗೆಯ ಪದಗಳನ್ನು, ವಿಶೇಷಣಗಳನ್ನು ಬಳಸುತ್ತಾನೆ? ಮುಂತಾದ ಕುತೂಹಲಕರ ಪ್ರಶ್ನೆಗಳಿಗೆ ಉತ್ತರ ಹುಡುಕಬೇಕಾಗುತ್ತದೆ.

ಸಂಸ್ಕøತಿ ಮಾನವನನ್ನು ದೈಹಿಕವಾಗಿ, ಬೌದ್ಧಿಕವಾಗಿ ಮತ್ತು ನೈತಿಕವಾಗಿ ನಿರ್ಧರಿಸುವುದಲ್ಲದೆ ಅವನಾಡುವ ಭಾಷೆಯನ್ನೂ ನಿರ್ಣಯಿಸುತ್ತದೆ. ಆದರೆ ಸಂಸ್ಕøತ ಹರಿಯುವುದು ಭಾಷೆಯ ಮೂಲಕವೇ ಆದ್ದರಿಂದ ಸಂಸ್ಕøತಿಯ ಅಧ್ಯಯನಕ್ಕೆ ಭಾಷೆ ಅತ್ಯಗತ್ಯ. ಭಾಷೆ ಮತ್ತು ಸಂಸ್ಕøತಿಯ ಸಂಬಂಧವನ್ನು ಕುರಿತ ಹ್ಯಾಮಂಡ್ ಅವರ ಈ ಹೇಳಿಕೆ ಹೆಚ್ಚು ಅರ್ಥಪೂರ್ಣವಾಗಿದೆ: `ಭಾಷೆ ಮತ್ತು ಸಂಸ್ಕøತಿಗೆ ಇರುವ ಸಂಬಂಧ ಅತಿ ನಿಕಟವಾದುದು. ಅವೆರಡೂ ಪರಸ್ಪರ ಪೂರಕವಾಗಿವೆ. ಸಂಸ್ಕøತಿ ಕಲಿಕೆಯಿಂದ ವಹನಗೊಳ್ಳುವಂಥದು. ಭಾಷೆಯ ನೆರವಿಲ್ಲದೆ ಸಂಸ್ಕøತಿ ಸಿದ್ಧಿಸುವುದಿಲ್ಲ. ನಾಗರಿಕತೆ ಬೆಳೆಯುವುದಿಲ್ಲ. ಸಮಾಜ ಬದಲಾಗುವುದಿಲ್ಲ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ